ವಿಶ್ವನಾಥ ಸತ್ಯನಾರಾಯಣ
	1895-1976. ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ತೆಲುಗು ಲೇಖಕ, ಕವಿ, ಕಥೆಗಾರ, ಕಾದಂಬರಿಕಾರ, ವಿಮರ್ಶಕ, ಗಮಕಿ. ಇವರು ತೆಲುಗು ಸಂಸ್ಕøತ, ಇಂಗ್ಲಿಷ್ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ನಂದಮೂರು ಗ್ರಾಮದಲ್ಲಿ 1895 ಸೆಪ್ಟೆಂಬರ್ 10 ರಂದು ಜನಿಸಿದರು. ತಾಯಿ ಪಾರ್ವತಮ್ಮ, ತಂದೆ ಶೋಭನಾದ್ರಿ. ನಂದಮೂರು, ಬಂದರುಗಳಲ್ಲಿ (ಮಚಲೀಪಟ್ಣಂ) ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣ ಪಡೆದರು (1929). ಹದಿಮೂರನೆಯ ವಯಸ್ಸಿನಲ್ಲೇ ಕವಿತಾ ರಚನೆಗೆ ತೊಡಗಿದರು. ವ್ಯಾಕರಣ, ವೇದಾಂತ ಪ್ರಕರಣ, ಸೂತ್ರಭಾಷ್ಯ, ಉಪನಿಷದ್ಭಾಷ್ಯಗಳನ್ನೆಲ್ಲ ಅಭ್ಯಾಸ ಮಾಡಿದರು. ತಾವು ಪದವಿ ಪಡೆದ ಬಂದರು ನ್ಯಾಷನಲ್ ಕಾಲೇಜಿನಲ್ಲಿ ಮತ್ತು ಗುಂಟೂರಿನ ಆಂಧ್ರ ಕ್ರಿಶ್ಚಿಯನ್ ಕಾಲೇಜಿನಲ್ಲಿ ಸ್ವಲ್ಪಕಾಲ ತೆಲುಗು ಅಧ್ಯಾಪಕರಾಗಿ ಕೆಲಸ ಮಾಡಿದರು. ಅನಂತರ ವಿಜಯವಾಡದ ಎಸ್.ಆರ್.ಆರ್. ಅಂಡ್ ಸಿ.ವಿ.ಆರ್. ಕಾಲೇಜಿನಲ್ಲಿ ತೆಲುಗು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು (1938-59). ತರುವಾಯ ಕರೀಂನಗರ ಕಾಲೇಜಿನ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸಿ ನಿವೃತ್ತರಾದರು (1963). 
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

	1916-70ರ ಅವಧಿಯಲ್ಲಿ ರಚನೆಗೊಂಡಿರುವ ಇವರ ಕೃತಿಗಳಲ್ಲಿ ಬಿಡಿಕವನಗಳು, ಖಂಡಕಾವ್ಯ (ಆಂಧ್ರ ಪ್ರಶಸ್ತಿ, ಕಿನ್ನೆರಸಾನಿ ಪಾಟಲು, ಗಿರಿಕುಮಾರುನಿ ಪ್ರೇಮಗೀತಾಲು ಇತ್ಯಾದಿ ಎರಡು ಸಂಪುಟಗಳು), ಶತಕ (ವಿಶ್ವೇಶ್ವರ ಶತಕ), ಗೀತಕಾವ್ಯ (ಗೋಪಿಕಾಗೀತಲು ಇತ್ಯಾದಿ), ಉದಾಹರಣ (ಗೋಪಾಲೋದಾಹರಣಮು), ಐತಿಹಾಸಿಕ ಕಾವ್ಯ (ಝಾನ್ಸೀ ರಾಣಿ, ಶಿವಾರ್ಪಣಮು ಇತ್ಯಾದಿ), ಪೌರಾಣಿಕ ಕಾವ್ಯಗಳು (ವೇಣೀಭಂಗಮು, ಪಿಲ್ಲಲ ರಾಮಾಯಣಮು ಇತ್ಯಾದಿ) ಸೇರಿವೆ. ಇವರು ಕಾವ್ಯದಲ್ಲಿ ಹಲವು ರೀತಿಯ ಪ್ರಯೋಗಗಳನ್ನು ಮಾಡಿದ್ದಾರೆ. ತಮ್ಮ ಕಾವ್ಯ ರಚನೆಗೆ ಪ್ರಾಚೀನ ಛಂದಸ್ಸುಗಳನ್ನು ಬಳಸಿದ್ದಲ್ಲದೆ ಹೊಸ ಲಯಗಳನ್ನು ಸೃಷ್ಟಿಸಿದ್ದಾರೆ. ಪ್ರಾಚೀನ ಛಂದಸ್ಸಾದ ಮಧ್ಯಾಕ್ಕ¾ದಲ್ಲೇ ಹತ್ತು ಶತಕಗಳನ್ನು ಬರೆದಿದ್ದಾರೆ. ಇವರ ವಿಶ್ವನಾಥ ಮಧ್ಯಾಕ್ಕ¾ಲು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ(1963).

	ಶ್ರೀಮದ್ರಾಮಾಯಣ ಕಲ್ಪವೃಕ್ಷಮು (ರಚನೆ : 1934-62) ಇವರ ಮೇರು ಕೃತಿ. ಇದು ವಾಲ್ಮೀಕಿ ರಾಮಾಯಣದ ಕಥೆಯನ್ನು ಅನುಸರಿಸಿ ಬರೆದ ಕೃತಿಯಾದರೂ ಭಾರತೀಯ ಸಾಂಸ್ಕøತಿಕ ಪರಂಪರೆಯಲ್ಲಿ ಕಲ್ಪವೃಕ್ಷದಂತೆ ಬೆಳೆದ ರಾಮಾಯಣ ಸಂಸ್ಕøತಿಯನ್ನು ಗಮನದಲ್ಲಿಟ್ಟು ಕೊಂಡು ರಚಿತವಾಗಿದೆ. ಇದರಲ್ಲಿಯ ಅನೇಕ ಬದಲಾವಣೆಗಳು ಮೂಲ ವಾಲ್ಮೀಕಿ ರಾಮಾಯಣಕ್ಕೆ ವ್ಯಾಖ್ಯಾನದಂತಿವೆ. ವರ್ಣನೆ, ನಿರೂಪಣೆ, ಪಾತ್ರಚಿತ್ರಣ, ಛಂದೋವೈವಿಧ್ಯ ಮುಂತಾದ ವಿಷಯಗಳಲ್ಲಿ ಕವಿ ಪ್ರತಿಭೆ ವ್ಯಕ್ತವಾಗಿದೆ. ಈ ಕೃತಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ (1971). 

	ಇವರು 15 ನಾಟಕಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಪೌರಾಣಿಕ (ವೇನರಾಜು, ನರ್ತನಶಾಲಾ, ಕಾವ್ಯವೇದ ಹರಿಶ್ಚಂದ್ರಮುಲು, ಸೌಪ್ತಿಕ ಪ್ರಳಯಮು), ಐತಿಹಾಸಿಕ (ತ್ರಿಶೂಲಮು, ಅನಾರ್ಕಲಿ), ಸಾಮಾಜಿಕ (ಧನ್ಯಕೈಲಾ ಸಮು, ಲೋಪಲಾ-ಬಯಟಾ, ಸತ್ಯಾಗ್ರಹಮು, ಅಂತಾ ನಾಟಕಮೇ ಇತ್ಯಾದಿ), ರಾಜಕೀಯ (ಅವತಾರ ಪರಿರ್ವನಮು, ಭಸ್ಮಾಸುರ ಚಯನಮು), ಕಿರುನಾಟಕ (ದುರ್ಯೋಧನುಡು, ಕಿರೀಟ ಮಣಿ, ನಾಗಮಣಿ), ಸಂಸ್ಕøತ ನಾಟಕಗಳು (ಅಮೃತ ಶರ್ಮಿಷ್ಠಮ್, ಗುಪ್ತಪಾಶು ಪತಮ್, ಅಶನಿ ನಿರಾಸಮ್) ಸೇರಿವೆ. ಭಾರತೀಯ ನಾಟಕ ಲಕ್ಷಣಗಳ ಜೊತೆಗೆ ಪಾಶ್ಚಾತ್ಯ ನಾಟಕ ಲಕ್ಷಣಗಳನ್ನು ಅಳವಡಿಸಿ ನಾಟಕಗಳನ್ನು ಬರೆಯಲಾಗಿದೆ. ಆದರ್ಶ ಪ್ರಣಯ, ದೇಶಭಕ್ತಿ, ರಾಜನೀತಿ, ಧಾರ್ಮಿಕ ಚಿಂತನೆಗಳು ಈ ನಾಟಕಗಳಿಗೆ ಮೂಲಪ್ರೇರಣೆಗಳು. 

	ಮಹಾಕವಿ ಎಂಬ ಹೆಸರಿಗೆ ಪಾತ್ರರಾದ ಇವರು ಮಹಾಕಾದಂಬರಿ ಕಾರರೆಂದೂ ಖ್ಯಾತಿ ಪಡೆದವರು. ಇವರ ವೇಯಿಪಡಗಲು (ಸಾವಿರ ಹೆಡೆಗಳು), ಆರುನದುಲು (ಆರು ನದಿಗಳು) ಮುಂತಾದವು ವಿಶ್ವಕೋಶದ ಹರವನ್ನು ಪಡೆದಿವೆ. ಐತಿಹಾಸಿಕ (ವೀರಪೂಜ, ಬದ್ದನ್ನ ಸೇನಾನಿ, ಏಕವೀರ, ಧೂಮರೇಖ, ನಿವೇದಿತ, ಯಶೋಮತಿ, ಲಲಿತಾ ಪಟ್ಟಣಪು ರಾಣಿ), ಸಾಮಾಜಿಕ (ದೇವತಲ ಯುದ್ಧ, ಮಾಬಾಬು, ಪುನರ್ಜನ್ಮ ಇತ್ಯಾದಿ), ಸಾಂಸ್ಕøತಿಕ (ಅಂತರಾತ್ಮ, ವೇಯಿಪಡಗಲು, ಮೂಡುತರಾಲು ಇತ್ಯಾದಿ), ರಾಜಕೀಯ (ಪುಲುಲ ಸತ್ಯಾಗ್ರಹಮು, ವಲ್ಲಭಮಂತ್ರಿ, ದಮಯಂತೀ ಸ್ವಯಂವರಮು), ವಿಡಂಬನಾತ್ಮಕ (ವಿಷ್ಣುಶರ್ಮ ಇಂಗ್ಲೀಷು ಚದುವು) ಎಂಬ ಹಲವು ವಿಭಾಗಗಳಲ್ಲಿ ಇವರ ಕಾದಂಬರಿಗಳನ್ನು ಪರಿಶೀಲಿಸಬಹುದು. ಕಾಶ್ಮೀರ, ನೇಪಾಳ, ದಕ್ಷಿಣ ಭಾರತ, ಆಂಧ್ರದ ಇತಿಹಾಸ ಇವರ ಅನೇಕ ಕಾದಂಬರಿಗಳಿಗೆ ವಸ್ತುವಾಗಿವೆ. ಇವರು ಸೃಷ್ಟಿಸಿದ ನೂರಾರು ಪಾತ್ರಗಳು ಮಾನವಜೀವನದ ಹಲವಾರು ವ್ಯಕ್ತಿತ್ವಗಳಿಗೆ ಪ್ರತೀಕವಾಗಿವೆ. ನಾಯಕ ಪಾತ್ರಗಳಲ್ಲಿ ರಾಜರು, ರಾಜಕಾರಣಿಗಳು, ಗಾಯಕರು, ನಟರು, ಅಧ್ಯಾಪಕರು ಸೇರಿದ್ದಾರೆ. ಪಾತ್ರಗಳ ಮನೋವಿಶ್ಲೇಷಣೆ, ಸನ್ನಿವೇಶಕಲ್ಪನೆ, ಸೂಕ್ಷ್ಮವರ್ಣನೆ, ಸ್ವಭಾವ ವಿವೇಚನೆ ಮುಂತಾದ ವಿಚಾರಗಳಲ್ಲಿ ಇವರ ಕಾದಂಬರಿಗಳು ವಿಶಿಷ್ಟವಾಗಿವೆ. 

	ಇವರು ಖ್ಯಾತ ವಿಮರ್ಶಕರೂ ಹೌದು. ನನ್ನಯ, ನಾಚನ ಸೋಮನ, ಶ್ರೀಕೃಷ್ಣದೇವರಾಯ, ಅಲ್ಲಸಾನಿ ಪೆದ್ದನ, ವಾಲ್ಮೀಕಿ, ಕಾಳಿದಾಸ ಮೊದಲಾದವರ ಬಗ್ಗೆ ಮೌಲಿಕ ವಿಮರ್ಶೆಯನ್ನು (ನನ್ನಯಗಾರಿ ಪ್ರಸನ್ನ ಕಥಾ ಕಲಿತಾರ್ಥಯುಕ್ತಿ, ಒಕಡು ನಾಚನ ಸೋಮನ್ನ, ಸಾಹಿತ್ಯ ಸುರಭಿ) ನೀಡಿದ್ದಾರೆ. ಸಂಸ್ಕøತದಲ್ಲೂ ಇಂಗ್ಲಿಷಿನಲ್ಲೂ ಇವರ ವಿಮರ್ಶಾ ಸಂಕಲನಗಳಿವೆ. ಇವರ ಇತರ ರಚನೆಗಳಲ್ಲಿ ಸಣ್ಣಕಥೆ, ಆತ್ಮಕಥನ, ಗ್ರಂಥಸಂಪಾದನೆ, ಅನುವಾದಗಳು ಸೇರಿವೆ. 

	ಇವರಿಗೆ ದೊರೆತ ಪ್ರಶಸ್ತಿ, ಸನ್ಮಾನಗಳು ಹಲವಾರು : ಬಂದರು ಸನ್ಮಾನ ಸಭೆಯ ಕವಿಸಾಮ್ರಾಟ್ ಬಿರುದು (1935), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1963), ವಿಮರ್ಶಕ ಚಕ್ರವರ್ತಿ ಬಿರುದು (1963), ಆಂಧ್ರ ವಿಶ್ವವಿದ್ಯಾಲಯದ ಕಲಾಪ್ರಪೂರ್ಣ ಬಿರುದು (1964), ಆಂಧ್ರ ಪ್ರದೇಶ ಸರ್ಕಾರದ ಆಸ್ಥಾನಕವಿ ಗೌರವ (1969-76), ಕೇಂದ್ರ ಸರ್ಕಾರದ ಪದ್ಮಭೂಷಣ ಪ್ರಶಸ್ತಿ (1970), ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ ಸದಸ್ಯತ್ವ (1970), ತಿರುಪತಿಯ ಶ್ರೀವೆಂಕಟೇಶ್ವರ ವಿಶ್ವವಿದ್ಯಾ ಲಯದ ಗೌರವ ಡಾಕ್ಟೊರೇಟ್ (1971), ಜ್ಞಾನಪೀಠ ಪ್ರಶಸ್ತಿ (1971). ಇವರಿಗೆ ಜೇಸೀಸ್‍ನವರು ಸುವರ್ಣ ಪುಷ್ಪ ಸಮರ್ಚನಾ ಮಹೋತ್ಸವ ವನ್ನು ಏರ್ಪಡಿಸಿದ್ದರು (1976). ಇವರು ಆಂಧ್ರ ಪ್ರದೇಶ ಸಾಹಿತ್ಯ ಅಕಾಡೆಮಿಯ ಪ್ರಥಮ ಉಪಾಧ್ಯಕ್ಷರೂ (1957) ಅನಂತರ ಜೀವಿತಾವಧಿ ಪೂರ್ಣ ಉಪಾಧ್ಯಕ್ಷರೂ (1976)ಆಗಿದ್ದರು. ಆಂಧ್ರ ಸರ್ಕಾರದ ವಿಧಾನ ಪರಿಷತ್ತಿನ ಸದಸ್ಯರಾಗಿ (1958) ನಾಮಕರಣವಾಗಿದ್ದರು. 

	ಇವರ ಅನೇಕ ಕೃತಿಗಳು ಇಂಗ್ಲಿಷ್, ಹಿಂದಿ, ಕನ್ನಡ, ಉರ್ದು ಭಾಷೆಗಳಿಗೆ ಅನುವಾದಗೊಂಡಿವೆ. ಅನೇಕರು ಇವರ ಸಾಹಿತ್ಯದ ವಿವಿಧ ವಿಚಾರಗಳನ್ನು ಕುರಿತು ಅಧ್ಯಯನ ಕೈಗೊಂಡು ಎಂ.ಫಿಲ್. ಹಾಗೂ ಪಿಎಚ್.ಡಿ. ಪದವಿಗಳನ್ನು ಪಡೆದಿದ್ದಾರೆ. ಇವರು ಜಯಂತಿ ಎಂಬ ಪತ್ರಿಕೆಯ ಸಂಸ್ಥಾಪಕರೂ ಆಗಿದ್ದರು. ಇವರು 1976 ಸೆಪ್ಟೆಂಬರ್ 18 ರಂದು ನಿಧನರಾದರು.	
											(ಆರ್.ವಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ